ಮಾಯಾಸಂಖ್ಯೆಗಳು
ನ್ಯೂಕ್ಲಿಯಸಿನ ಚಿಪ್ಪು ಪ್ರತಿರೂಪಕ್ಕೆ (ಮಾಡೆಲ್) ಮೂಲಾಧಾರವಾದ ಸಂಖ್ಯೆಗಳು (ಮ್ಯಾಜಿಕ್ ನಂಬರ್ಸ್).  ಇವು 2, 8, 20, (28), (40), 50, 82, ಮತ್ತು 126.  ಒಂದು ನ್ಯೂಕ್ಲಿಯಸಿನಲ್ಲಿ ಪ್ರೋಟಾನುಗಳ ಸಂಖ್ಯೆಯಾಗಲಿ ನ್ಯೂಟ್ರಾನುಗಳ ಸಂಖ್ಯೆಯಾಗಲಿ ಮಾಯಾಸಂಖ್ಯೆಯಾಗಿದ್ದರೆ ಅಂಥ ನ್ಯೂಕ್ಲಿಯಸ್ ಹೆಚ್ಚು ದೃಢವಾಗಿರುತ್ತದೆ.  2ರಿಂದ 82ರ ವರೆಗಿನ ಮಾಯಾ ಸಂಖ್ಯೆಗಳು ಪ್ರೋಟ್ರಾನ್ ಮತ್ತು ನ್ಯೂಟ್ರಾನ್ ಎರಡಕ್ಕೂ ಅನ್ವಯಿಸುತ್ತವೆ.  126 ಮಾತ್ರ ನ್ಯೂಟ್ರಾನ್ ಸಂಖ್ಯೆಗೆ ಅನ್ವಯಿಸುತ್ತದೆ.  ಆವರಣದಲ್ಲಿರುವ ಸಂಖ್ಯೆಗಳು ಅರ್ಧ ಮಾಯಾಸಂಖ್ಯೆಗಳು.

ದ್ರವಬಿಂದು ಪ್ರತಿರೂಪ ಹೆಚ್ಚು ಮಾನ್ಯತೆ ಪಡೆದಿದ್ದ ಕಾಲದಲ್ಲಿ ಚಿಪ್ಪು ಪ್ರತಿರೂಪ ಹಿಂದೆ ಸರಿದಿತ್ತು.  ನ್ಯೂಕ್ಲಿಯಸಿನ ಭೌತರಚನೆಗೆ ಆಕರ್ಷಣಕೇಂದ್ರವನ್ನು ಊಹಿಸಿಕೊಳ್ಳುವುದರಲ್ಲಿದ್ದ ತೊಡಕು ಇದರ ಕಾರಣ.  ಆದರೆ ವೀಕ್ಷಣೆ ಮತ್ತು ಪ್ರಯೋಗ ದತ್ತಾಂಶಗಳು ಮಾಯಾ ಸಂಖ್ಯೆಗಳ ಮಹತ್ತ್ವವನ್ನು ಪ್ರತಿಪಾದಿಸುತ್ತಲೆ ಇದ್ದುವು. ಪ್ರೋಟಾನ್ ಅಥವಾ ನ್ಯೂಟ್ರಾನಿನ ಸಂಖ್ಯೆ ಒಂದು ನ್ಯೂಕ್ಲಿಯಸ್‍ನಲ್ಲಿ ಮಾಯಾ ಸಂಖ್ಯೆ ಆಗಿದ್ದರೆ ಅಂಥ ಧಾತು ಪ್ರಕೃತಿಯಲ್ಲಿ ಹೇರಳವಾಗಿರುತ್ತದೆ.  ಮಾಯಾ ಸಂಖ್ಯೆಗಿಂತ ಒಂದು ಪ್ರೋಟಾನ್ ಅಥವಾ ನ್ಯೂಟ್ರಾನ್ ಕಡಿಮೆ ಇದ್ದರೆ ಅಂಥ ನ್ಯೂಕ್ಲಿಯಸ್ ಅನುಕ್ರಮವಾಗಿ ಪ್ರೋಟಾನ್ ಅಥವಾ ನ್ಯೂಟ್ರಾನನ್ನು ಹೀರಿಕೊಳ್ಳಲು ತವಕಪಡುತ್ತದೆ.  ಪ್ರೋಟಾನ್ ಅಥವಾ ನ್ಯೂಟ್ರಾನಿನ ಸಂಖ್ಯೆ ಮಾಯಾಸಂಖ್ಯೆ ಆಗಿದ್ದರೆ ಅಂಥ ನ್ಯೂಕ್ಲಿಯಸ್ ಸ್ವಲ್ಪ ಹೆಚ್ಚು ಕಡಿಮೆ ಗೋಳ ಸಮಪಾಶ್ರ್ವತೆಯನ್ನು ಹೊಂದಿರುತ್ತದೆ. ಅತಿಯಾದ ದೃಢತೆ ಮತ್ತು ಗೋಳಸಮಪಾಶ್ರ್ವ ಮಾಯಾಸಂಖ್ಯೆಗೂ ಚಿಪ್ಪು ಮುಚ್ಚಿಗೂ ಇರುವ ಸಂಬಂಧವನ್ನು ಯಾವ ಸಂಶಯಕ್ಕೂ ಎಡೆಕೊಡದಂತೆ ಸ್ಥಾಪಿಸುತ್ತವೆ.  ಪರಮಾಣುಗಳ ರಚನೆಯಲ್ಲೂ ಇಂಥ ಪರಿಸ್ಥಿತಿ ಇದೆ.  ಇದನ್ನು ಗಮನಿಸಿದ ಭೌತವಿಜ್ಞಾನಿ ಮೇಯರ್ ಮತ್ತು ಜೆನ್ಸನ್ ಹಾಗೂ ಅವರ ಸಹವರ್ತಿಗಳು ನ್ಯೂಕ್ಲಿಯಸಿನ ಚಿಪ್ಪು ಪ್ರತಿರೂಪವನ್ನು ಮಂಡಿಸಿದರು.  

ಚಿಪ್ಪು ಪ್ರತಿರೂಪ ಕಲ್ಪನೆಗೆ ಒಂದು ನ್ಯೂಕ್ಲಿಯಸಿನಲ್ಲಿ ಯಾವುದೇ ಒಂದು ನ್ಯೂಕ್ಲಿಯಾನನ್ನು ಗಮನದಲ್ಲಿಟ್ಟುಕೊಂಡು ಅದರ ಮತ್ತು ಉಳಿದ ನ್ಯೂಕ್ಲಿಯಾನುಗಳ ನಡುವಿನ ಪ್ರಕ್ರಿಯೆಯನ್ನು ಒಂದು ವಿಭವ ಬಾವಿಗೆ ಸಮಗೊಳಿಸಿದರೆ ಸಾಕು.  ಹೀಗೆ ಮಾಡುವುದರಿಂದ ಕೆಳಗಿನ ಮಾಯಾಸಂಖ್ಯೆಗಳು ಮೂಡಿಬರುತ್ತವಾದರೂ ಮೇಲಿನವು ಬರುವುದಿಲ್ಲ.  ಇದನ್ನು ತಪ್ಪಿಸಲು ಮೇಯರ್ ಮತ್ತು ಜೆನ್ಸನ್ ಹಾಗೂ ಅವರ ಸಂಗಡಿಗರು ಗಿರಕಿ(ಸ್ಪಿನ್) ಮತ್ತು ಆವರ್ತನೆಗಳ ನಡುವೆ (s, l) ರೂಪದ ತಳಿಕೆಯನ್ನು ಊಹಿಸಿಕೊಂಡರು. ಇಲ್ಲಿ s ಸ್ಪಿನ್ ಮತ್ತು l ಕೋನೀಯ ಸಂವೇಗ.  ಹೀಗೆ ಮಾಡಿದ್ದರಿಂದ ಲೆಕ್ಕಾಚಾರದಲ್ಲಿ ಎಲ್ಲ ಮಾಯಾಸಂಖ್ಯೆಗಳೂ ಮೂಡಿ ಬಂದುವು.  ಈ ಸಾಧನೆಗಾಗಿ ಮೇಯರ್ ಮತ್ತು ಜೆನ್ಸನ್ ಅವರಿಗೆ ನೊಬೆಲ್ ಪಾರಿತೋಷಿಕ ದೊರೆಯಿತು.  ನ್ಯೂಕ್ಲಿಯಸಿನ ದೃಢತೆಗೂ ಮಾಯಾಸಂಖ್ಯೆಗಳಿಗೂ ಇದ್ದ ಸಂಬಂಧ ತಿಳಿಯದೆ ಇದ್ದಾಗ ಬಂದ ಹೆಸರು ಇದು.  ಈಗ ಮಾಯಾಸಂಖ್ಯೆಗಳಿಗೂ ಚಿಪ್ಪು ಮುಚ್ಚಿಗೆಗೂ ಇರುವ ಸಂಬಂಧ ಚೆನ್ನಾಗಿ ಗೊತ್ತಾಗಿದೆ.  ಆದರೂ ಐತಿಹಾಸಿಕ ಕಾರಣಕ್ಕಾಗಿ ಅದೇ ಹೆಸರು ಉಳಿದಿದೆ.  

ಪ್ರೋಟಾನ್ ಮತ್ತು ನ್ಯೂಟ್ರಾನ್ ಸಂಖ್ಯೆಗಳೆರಡೂ ಮಾಯಾಸಂಖ್ಯೆಗಳಾಗಿದ್ದರೆ ಅಂಥ ನ್ಯೂಕ್ಲಿಯಸ್ ಇನ್ನೂ ದೃಢವಾಗಿರುತ್ತದೆ.  ಅತಿ ಭಾರವಾದ ದ್ವಿಮಾಯಾ ನ್ಯೂಕ್ಲಿಯಸ್ ಸೀಸ-208.  82ರಿಂದ ಮುಂದಿನ ಪ್ರೋಟಾನ್ ಮಾಯಾಸಂಖ್ಯೆ 110(116). 126ರಿಂದ ಮುಂದಿನ ನ್ಯೂಟ್ರಾನ್ ಮಾಯಾಸಂಖ್ಯೆ 184.  110 ಪ್ರೋಟಾನುಗಳು ಮತ್ತು 184 ನ್ಯೂಟ್ರಾನುಗಳು ಇರುವ ದೈತ್ಯ ನ್ಯೂಕ್ಲಿಯಸೊಂದು ಇದ್ದರೆ ಅದು ಸಹ ದೃಢವಾಗಿರುವುದೆಂದು ನಂಬಬಹುದು.  ಇಂಥ ನಂಬಿಕೆಯಿಂದ ದೈತ್ಯಭಾರ (ಸೂಪರ್ ಹೆವಿ) ನ್ಯೂಕ್ಲಿಯಸುಗಳಿಗಾಗಿ ಶೋಧನೆ ನಡೆದಿದೆ.  ಆದರೆ ಪ್ರಕೃತಿಯಲ್ಲಿ ಇವು ಸಿಕ್ಕಿಲ್ಲ.  ಪ್ರಯೋಗಶಾಲೆಯಲ್ಲಿ ಇವನ್ನು ಸಂಯೋಜಿಸಲು ಪ್ರಯತ್ನಗಳು ನಡೆಯುತ್ತಿವೆ.  ಈ ಪ್ರಯತ್ನಗಳು ಫಲಿಸಿದರೆ ರಿಯಾಕ್ಟರ್ ಉದ್ಯಮ ಪ್ರಯತ್ನಗಳು ನಡೆಯುತ್ತಿವೆ.  ಈ ಪ್ರಯತ್ನಗಳು ಫಲಿಸಿದರೆ ರಿಯಾಕ್ಟರ್ ಉದ್ಯಮದಲ್ಲಿ ಒಂದು ಕ್ರಾಂತಿಯೇ ನಡೆಯುತ್ತದೆ.     
(ಎಸ್.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ